ಆತ್ಮಸಾಕ್ಷಿಯ ವಿರೋಧಕರು
ಆಡಳಿತವೇ ಆಗಲಿ ಸಂಘ ಸಂಸ್ಥೆಗಳೇ ಆಗಲಿ, ವಿಧಿಸುವ ಕಾನೂನುಗಳಲ್ಲಿ, ತರುವ ನಿರ್ಬಂಧಗಳಲ್ಲಿ ತಮ್ಮ ಆತ್ಮಕ್ಕೆ (ಮನಃಸಾಕ್ಷಿಗೆ) ಒಪ್ಪದವುಗಳ ವಿಷಯದಲ್ಲಿ ತಮ್ಮ ವಿರೋಧವಿದೆಯೆಂದು ತಿಳಿಸುವವರು (ಕಾನ್‍ಸೆನ್‍ಷಿಯಸ್ ಅಬ್ಜೆಕ್ಟರ್). ಯುದ್ಧವನ್ನು ಆತ್ಮಸಾಕ್ಷಿಯಾಗಿ ತಾವು ಒಪ್ಪುವುದಿಲ್ಲವೆಂದು ಹೇಳಿ ಕಡ್ಡಾಯವಾದ ಸೈನಿಕ ಸೇವೆಗೆ ಒಪ್ಪದವರನ್ನು ಈ ಹೆಸರಿನಿಂದ ಕರೆಯಲಾಯಿತು.

ಇಂಥವರು ಜನಸಾಮಾನ್ಯರ ಗಮನವನ್ನು ಸೆಳೆದದ್ದು ಪ್ರಥಮ ಮಹಾಯುದ್ಧ ಕಾಲದಲ್ಲಿ. ಆಗ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಅಮೆರಿಕ ಸಂಯುಕ್ತಸಂಸ್ಥಾನ ಮುಂತಾದ ದೇಶಗಳಲ್ಲಿ ಕಡ್ಡಾಯ ಸೈನ್ಯ ಸೇವೆ ವಿಧಿಸಲಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನ ಯೂರೋಪ್ ದೇಶಗಳ ರಾಜಕೀಯ ಮತ್ತು ಯುದ್ಧಗಳಿಂದ ಅದುವರೆಗೂ ದೂರವಿದ್ದು ಪ್ರಥಮ ಮಹಾಯುದ್ಧದ ಕಾಲದಲ್ಲಿ ವ್ಯಾಪಕ ಯುದ್ಧ ಸನ್ನದ್ಧತೆಗಳಲ್ಲಿ ತೊಡಗಿದ್ದರಿಂದ, ಅಲ್ಲಿ ಅದನ್ನು ಮನಃಸಾಕ್ಷಿಯಾಗಿ ಆಕ್ಷೇಪಿಸುವವರ ಸಂಖ್ಯೆ ಹೆಚ್ಚಾಗಿತ್ತು. ಎರಡನೆಯ ಮಹಾಯುದ್ಧದ ಕಾಲದಲ್ಲೂ ಅಮೆರಿಕದ ಸಾವಿರಾರು ಜನ ಈ ಗುಂಪಿಗೆ ಸೇರಿದ್ದರು.

ಆತ್ಮಸಾಕ್ಷಿಯ ವಿರೋಧದ ಮೂಲ ಧಾರ್ಮಿಕವಾಗಿರಬಹುದು, ರಾಜಕೀಯವಾಗಿರಬಹುದು ಇಲ್ಲವೆ ಕೇವಲ ವೈಯಕ್ತಿಕವಾಗಿರಬಹುದು.
ಮೊದಲನೆಯ ವರ್ಗದಲ್ಲಿ ಅನಾಬಾಪ್ಟಿಸ್ಟರು, ಮೆನ್ನೊನೈಟರು, ಕ್ವೇಕರರು, ಯೆಹೋವನ ಸಾಕ್ಷಿಗಳು, ಡಂಕರರು - ಮೊದಲಾದ ಧಾರ್ಮಿಕ ಪಂಗಡಗಳು ಸೇರಿವೆ. ಇವೆಲ್ಲ ಸಣ್ಣ ಪಂಗಡಗಳು; ಮಾರ್ಟಿನ್ ಲೂಥರನ ರೆಫರ್ಮೇಷನ್ ಚಳವಳಿಗೆ ಸಂಬಂಧಪಟ್ಟುವು ಕ್ಯಾಥೋಲಿಕ್ ಮಠಗಳ ಆಧ್ಯಾತ್ಮಿಕ ದಬ್ಬಾಳಿಕೆಯನ್ನು ವಿರೋಧಿಸಿ ಮಾರ್ಟಿನ್ ಲೂಥರ್ ಮನಃಸಾಕ್ಷಿಯ ಮಹತ್ತ್ವವನ್ನು ಎತ್ತಿ ಹಿಡಿದ. 16ನೆಯ ಶತಮಾನದ ಮಧ್ಯದಲ್ಲಿ ಅನಾಬಾಪ್ಟಿಸ್ಟರು, ಮೆನ್ನೊನೈಟರು (ಪೋಲೆಂಡ್ ಮತ್ತು ಸುತ್ತಮುತ್ತಲಿನ ದೇಶಗಳ ಅನಾಬಾಪ್ಟಿಸ್ಟರು) ಲೂಥರನ ಈ ವಿಚಾರಕ್ಕೆ ಉಗ್ರ ಸ್ವರೂಪ ಕೊಟ್ಟರು. ಮನಃಸಾಕ್ಷಿಯೇ ಧರ್ಮದ ಆಧಾರವಾಗಿದ್ದು, ಮಠಗಳು ಯಾವ ತರದ ಕಟ್ಟಳೆಗಳನ್ನೂ ವಿಧಿಸಬಾರದೆಂದು ಪ್ರತಿಪಾದಿಸಿದರು. 18ನೆಯ ಶತಮಾನದಲ್ಲಿ, ಇಂಗ್ಲೆಂಡಿನಲ್ಲಿ ಮೆಥಾಡಿಸ್ಟ್ ಆಂದೋಲನಕ್ಕೆ ಸೇರಿದ ಕ್ವೇಕರರು ಇದೇ ರೀತಿಯಾಗಿ ಮನಸ್ಸಾಕ್ಷಿಯ ಹಿರಿಮೆಯನ್ನು ಪ್ರತಿಪಾದಿಸಿ, ಧಾರ್ಮಿಕ ಗುರುಗಳ, ಪೂಜಾರರ ರೀತಿನಿಯಮಗಳ ಮಾರ್ಗದರ್ಶನ ಮುಖ್ಯವಲ್ಲವೆಂದು ಬೋಧಿಸಿದರು. ಹಾಗೆಯೇ ಇತರ ಪಂಗಡಗಳವರೂ ಮಾಡಿದರು. ಈ ಪಂಗಡಗಳಿಗೆ ಸೇರಿದ ಸಾವಿರಾರು ಜನ ಅಮೆರಿಕದಲ್ಲಿ ಬಹಳ ಕಾಲದಿಂದ ನೆಲೆಸಿದ್ದರು. ಇವರಿಗೆ ಯುದ್ಧದಲ್ಲಿ ನಂಬಿಕೆ ಇರಲಿಲ್ಲವಾದ್ದರಿಂದ. ಕಡ್ಡಾಯ ಸೇವೆಯನ್ನು ಮನಸ್ಸಾಕ್ಷಿಯಾಗಿ ಆಕ್ಷೇಪಿಸಿದರು.

ಎರಡನೆಯ ವರ್ಗದಲ್ಲಿ ಸಮಾಜವಾದಿಗಳು ಮತ್ತು ಅರಾಜಕತಾವಾದಿಗಳು ಸೇರಿದ್ದರು. ಆ ಯುದ್ಧಗಳು ಬಂಡವಾಳಶಾಹಿ ಸಮಾಜದ ಹಿತರಕ್ಷಣೆಗೆ ವಿರೋಧವಾದುವಾದ್ದರಿಂದ ಅವನ್ನು ಮನಃಸಾಕ್ಷಿಯಾಗಿ ವಿರೋಧಿಸುತ್ತೇವೆಂದು ಅವರು ವಾದಿಸಿದರು. ಮೂರನೆಯ ವರ್ಗದವರ ಬಗ್ಗೆ ನೋಡಿ - ಮನಸ್ಸಾಕ್ಷಿ.

ಅಮೆರಿಕದಲ್ಲಿ ಧರ್ಮದ ಆಧಾರದ ಮೇಲೆ ಮನಸ್ಸಾಕ್ಷಿಯಾಗಿ ಆಕ್ಷೇಪಿಸುವವರಿಗೆ ಕಾಯಿದೆಗಳು ಕೆಲವು ರಿಯಾಯತಿಗಳನ್ನು ಕೊಟ್ಟುವು. ಸೈನ್ಯ ಸೇವೆಯನ್ನು ಕಾಳಗ ಸಂಬಂಧಿ ಮತ್ತು ಕಾಳಗೇತರವೆಂದು ವರ್ಗೀಕರಿಸಿ, ಮನಸ್ಸಾಕ್ಷಿಯಾಗಿ ಆಕ್ಷೇಪಿಸುವವರಿಗೆ ಕಾಳಗೇತರ ಸೇವೆಯನ್ನು ಒಪ್ಪಿಸಿದರು (ಕೃಷಿ, ಉದ್ಯೋಗ, ಔಷಧೋಪಚಾರ - ಇತ್ಯಾದಿ). ಇತರರಿಗೆ ರಿಯಾಯತಿಗಳು ಕಡಿಮೆ ಇದ್ದುವು. ರಾಷ್ಟ್ರೀಯ ಹಿತರಕ್ಷಣೆಯ ದೃಷ್ಟಿಯಿಂದ ಯುದ್ಧ ಸನ್ನಾಹದಲ್ಲಿ ಬಾಧೆಗಳನ್ನುಂಟುಮಾಡಿದುದಕ್ಕಾಗಿ ನೂರಾರು ಜನರನ್ನು ಪ್ರಥಮ ಮತ್ತು ದ್ವಿತೀಯ ಮಹಾಯುದ್ಧಗಳ ಕಾಲದಲ್ಲಿ ಬಂಧಿಸಲಾಯಿತು. ಆದರೆ ಯುದ್ಧದ ತರುವಾಯ ಅಧಿಕಾಂಶ ಜನರಿಗೆ ರಿಯಾಯತಿ ತೋರಿಸಿ ಬಿಡುಗಡೆ ಮಾಡಲಾಯಿತು. 		(ನೋಡಿ- ಅಹಿಂಸೆ) 			
(ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ